ಕಲ್ಕತ್ತ ಜನರಲ್ ಅಡ್ವರ್ಟೈಸರ್

 ಭಾರತದಲ್ಲಿ ಪ್ರಕಟವಾದ ಪ್ರಥಮ ವಾರ್ತಾಪತ್ರಿಕೆ. ಬೆಂಗಾಲ್ ಗೆeóÉಟ್ ಎಂದೂ ಇದಕ್ಕೆ ಹೆಸರಿತ್ತು. ಜೇಮ್ಸ್ ಆಗಸ್ಟಸ್ ಹಿಕಿ ಇದರ ಸಂಪಾದಕ, ಮುದ್ರಕ, ಮತ್ತು ಪ್ರಕಾಶಕನಾಗಿದ್ದ. ಸಕಲ ಪಕ್ಷಗಳನ್ನೂ ಪುರಸ್ಕರಿಸುವ ಆದರೆ ಯಾರ ಪ್ರಭಾವಕ್ಕೂ ಒಳಗಾಗದ ರಾಜಕೀಯ ಮತ್ತು ವಾಣಿಜ್ಯ ಸಾಪ್ತಾಹಿಕವೆಂದು ಘೋಷಿಸಿಕೊಂಡು ಈ ಪತ್ರಿಕೆಯ ಪ್ರಥಮ ಸಂಚಿಕೆ 1780ರ ಜನವರಿ 29ರಂದು ಹೊರಬಿತ್ತು. ಇದರ ಬಹುಭಾಗ ಜಾಹೀರಾತುಗಳಿಗೇ ಮೀಸಲು. ಎರಡು ಹಾಳೆಗಳಿಂದ ಕೂಡಿದ್ದ ಪತ್ರಿಕೆಯ ಆಕಾರ 12" ್ಠ 8". ಪ್ರತಿ ಪುಟದಲ್ಲೂ ಮೂರು ಅಂಕಣಗಳಿದ್ದುವು. ಇಂಗ್ಲಿಷ್ ಪತ್ರಿಕೆಗಳಿಂದ ಉದ್ಧøತ ಭಾಗಗಳನ್ನೂ ಸ್ಥಳೀಯ ಮತ್ತು ದೂರದ ಬಾತ್ಮಿಗಳನ್ನೂ ಪ್ರಕಟಿಸುತ್ತಿತ್ತು. ಪೊಯೆಟ್ಸ್ ಕಾರ್ನರ್ ಎಂಬ ವಿಶೇಷ ವಿಭಾಗದಲ್ಲಿ ಸಂಪಾದಕನೇ ಸಾರ್ವಜನಿಕ ಪ್ರಮುಖರನ್ನುದ್ದೇಶಿಸಿ ಬರೆದ ಬಹಿರಂಗ ಪತ್ರಗಳೂ ಕಲ್ಕತ್ತದಲ್ಲಿದ್ದ ಬ್ರಿಟಿಷ್ ಜನರನ್ನು ಕುರಿತ ವದಂತಿಗಳೂ ಪ್ರಕಟವಾಗುತ್ತಿದ್ದುವು. ಬ್ರಿಟಿಷ್ ವರ್ತಕರೂ ಐರೋಪ್ಯ ಪ್ರಜೆಗಳೂ ಇದರ ಗ್ರಾಹಕರು, ಪೋಷಕರು. ಪತ್ರಿಕೆ ಕ್ರಮೇಣ ನಿಂದನೆಯ ಬರೆವಣಿಗೆಯಲ್ಲಿ ತೊಡಗಿತು. ಗವರ್ನರ್_ಜನರಲ್ ವಾರನ್ ಹೇಸ್ಟಿಂಗ್ಸನ ಪುತ್ರನನ್ನೂ ಮುಖ್ಯ ನ್ಯಾಯಾಧೀಶನನ್ನೂ ಬಿಡಲಿಲ್ಲ. ಸರ್ಕಾರವನ್ನೂ ಐರೋಪ್ಯರನ್ನೂ ಕುರಿತ ಟೀಕೆಗಳ ಪರಿಣಾಮವಾಗಿ ಹಿಕಿಯ ದಸ್ತಗಿರಿಗೆ ಆಜ್ಞೆ ಹೊರಡಿಸಲಾಯಿತು. ಬಿಡುಗಡೆಗೆ ಜಾಮೀನಾಗಿ ಹಣ ಕೊಡಲು ಅವನಿಂದ ಸಾಧ್ಯವಾಗಲಿಲ್ಲ. ಮಾನನಷ್ಟಕರ ಹೇಳಿಕೆಗಳ ಪ್ರಕಟಣೆಗಾಗಿ ಅವನಿಗೆ ಒಂದು ವರ್ಷ ಸಜಾ ಮತ್ತು 7,000ರೂ. ದಂಡ ವಿಧಿಸಲಾಯಿತು. 

ಸಂಪಾದಕ ಜೈಲಿನಲ್ಲಿದ್ದಾಗಲೂ ಪತ್ರಿಕೆ ಪ್ರಕಟಣೆ ನಿಲ್ಲಿಸಲಿಲ್ಲ; ಅದರ ನೀತಿಯಲ್ಲೂ ಮಾರ್ಪಾಡಾಗಲಿಲ್ಲ. 1782ರಲ್ಲಿ ಹಿಕಿಯ ಮೇಲೆ ಮತ್ತೆ ಕ್ರಮ ಕೈಗೊಳ್ಳಲಾಯಿತು. ಅವನ ಅಚ್ಚುಕೂಟಕ್ಕೆ ಮುಟ್ಟುಗೋಲು ಹಾಕಲಾಯಿತು. ಭಾರತದ ಈ ಪ್ರಥಮ ಪತ್ರಿಕೆಯನ್ನು ಸರ್ಕಾರ ಮರ್ದಿಸಿ ಕೊಂದಿತು. ಆತ್ಮಸಾಕ್ಷಿ, ಶಿಕ್ಷಣ, ವಾಕ್ ಮತ್ತು ಸಮ್ಮೇಳನ ಸ್ವಾತಂತ್ರ್ಯಗಳನ್ನು ಎತ್ತಿ ಹಿಡಿದ ಈ ಪತ್ರಿಕೆ ಭಾರತದ ಪತ್ರಿಕೋದ್ಯಮದಲ್ಲಿ ಒಂದು ಮಹತ್ತರ ಪಾತ್ರವಹಿಸಿತು.          

(ಎಸ್.ಐ.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ